ನಿರ್ಭಯ ದೃಷ್ಟಿ ನ್ಯೂಸ್ ಕುಕನೂರು:-
ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಮುಕ್ತಗೊಳಿಸಲು ಎಲ್ಲರೂ ಶ್ರಮಿಸಿರಿ ಎಂದು ವಿದ್ಯಾರ್ಥಿಗಳಿಗೆ ಉದಯ್ ರಾಯರಡ್ಡಿ ಕರೆ

ಕುಕನೂರು ತಾಲೂಕಿನ ತಳಬಾಳ ಗ್ರಾಮದ ಸರ್ಕಾರಿ ವಸತಿಯುಕ್ತ ಮಾದರಿ ಪ್ರಥಮ ದರ್ಜೆ ಕಾಲೇಜು ಕಾಲೇಜಿನಲ್ಲಿ ಬಿ.ಎ ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ 17.10.2025 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ತಳಕಲ್ ಗ್ರಾಮದ ಯುವ ಮುಖಂಡರಾದ ಉದಯ್ ರಾಯರೆಡ್ಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಬಸವರಾಜ್ ರಾಯರೆಡ್ಡಿ ಅವರ ಪರಿಶ್ರಮದಿಂದ ಯಲಬುರ್ಗಾ ತಾಲೂಕಿನಲ್ಲಿ ಅತ್ಯಧಿಕ ಶೈಕ್ಷಣಿಕ ಸಂಸ್ಥೆಗಳಿವೆ. ತಳಕಲ್ ಗ್ರಾಮದಲ್ಲಿಯೇ ಎಲ್.ಕೆ.ಜಿ ಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಶೈಕ್ಷಣಿಕ ಸಂಸ್ಥೆಗಳು ಲಭ್ಯವಿದ್ದು ಜೊತೆಗೆ 371ನೇ ಜೆ ಆರ್ಟಿಕಲ್ ಸದುಪಯೋಗವನ್ನು ಮಾಡಿಕೊಂಡು ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಮುಕ್ತಗೊಳಿಸಲು ಎಲ್ಲರೂ ಶ್ರಮಿಸಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜು ದಾಖಲಾತಿಯಲ್ಲಿ ಅಧಿಕ ವಿದ್ಯಾರ್ಥಿನಿಯರ ದಾಖಲಾತಿಯನ್ನು ಶ್ಲಾಘಿಸಿ ಸಬಲೀಕರಣಗೊಂಡ ಮಹಿಳೆ ಜಗತ್ತನ್ನು ಸಬಲೀಕರಣಗೊಳಿಸಬಲ್ಲರು ಎಂದು ಹೇಳಿದರು.
ಸಂಯೋಜಕರಾದ ಪುಷ್ಪಾವತಿ ಕನಸಾವಿ ಪ್ರಾಸ್ತಾವಿಕವಾಗಿ ಮಾತನಾಡಿ ಬಿ.ಎ ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೊಸ ಪಯಣವು ಹೊಸ ಉತ್ಸಾಹ, ಹೊಸ ಜ್ಞಾನದಿಂದ ಕೂಡಿರಲಿ ಎಂದು ಆಶಿಸುತ್ತಾ,ಕಾಲೇಜಿನ ಮತ್ತು ಕಾಲೇಜಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ವಿವಿಧ ಘಟಕಗಳ ಕುರಿತು ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕೊಪ್ಪಳದ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಂ .ಯು. ಹಿರೇಮಠ್ ಅವರು ವಿದ್ಯಾರ್ಥಿಗಳು ನಿಮ್ಮ ಜೀವನವನ್ನು ಕೇವಲ ತರಗತಿ ಪರೀಕ್ಷೆ ಎಂಬ ಅಂಕೆ ಸಂಖ್ಯೆಗಳ ಸೀಮೆಯಲ್ಲಿಡದೆ ಜೊತೆಯಲ್ಲಿ ಇಂದು ನಿಮ್ಮ ಕಾಲೇಜಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ವಿವಿಧ ಘಟಕಗಳಲ್ಲಿ ಪಾಲ್ಗೊಂಡು ನಿಮ್ಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಿ ಸಂಸ್ಕೃತಿಯನ್ನು ಕಲೆಯಿರಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಶುಭಾ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಈ ಭಾಗದ ಜನಪ್ರಿಯ ಶಾಸಕರು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದಂತಹ ಬಸವರಾಜ ರಾಯರಡ್ಡಿ ಅವರು ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗಬಾರದೆಂಬ ಉದ್ದೇಶದಿಂದ ಇಂತಹ ಸುಸಜ್ಜಿತವಾದಂತಹ ಕಾಲೇಜನ್ನು ಸ್ಥಾಪಿಸಿದ್ದಾರೆ. ಇಂತಹ ಕಾಲೇಜಿನಲ್ಲಿ ಪ್ರವೇಶ ಪಡೆದಿರುವದು ನಿಮ್ಮ ಸುದೈವ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ನಿಮ್ಮ ತಂದೆ ತಾಯಿ ಮತ್ತು ಕಾಲೇಜಿಗೆ ಕೀರ್ತಿಯನ್ನು ಹೆಚ್ಚಿಸಿರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾದ ತಳಬಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಮೇಶ ತಿಮ್ಮರೆಡ್ಡಿ, ತಳಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀರನಗೌಡ ಚನ್ನವೀರನಗೌಡ ಮತ್ತು ಸಿಡಿಸಿ ಸದಸ್ಯರಾದ ನಿಂಗಪ್ಪ ಹೇಳವರ್ ಮಾತನಾಡಿ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳಿವೆ. ಇವುಗಳನ್ನು ಬಳಸಿಕೊಂಡು ನೀವು ಅತ್ಯುತ್ತಮ ಅಂಕಗಳನ್ನು ತೆಗೆಯುವುದರ ಜೊತೆಗೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಬಿಕಾಂ ವಿದ್ಯಾರ್ಥಿಗಳಾದ ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು.
ಸ್ವಾಗತವನ್ನು ಸಂತೋಷ್ ಕುಮಾರ್ ಅತಿಥಿ ಉಪನ್ಯಾಸಕರು, ವಂದನಾರ್ಪಣೆಯನ್ನು ಕುಮಾರಿ ವಸುಧಾ ಗ್ರಂಥಪಾಲಕರು ಮತ್ತು ನಿರೂಪಣೆಯನ್ನು ನರೇಂದ್ರ ರಾಥೋಡ್ ಉಪನ್ಯಾಸಕರು ನೇರವೇರಿಸಿಕೊಟ‌್ಟರು.

ಸುದ್ದಿ ಜಾಗೃತಿಗಾಗಿ ಸಂಪರ್ಕಿಸಿ.ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು 9164386713