ಅನ್ನಭಾಗ್ಯ ಯೋಜನೆಯಲ್ಲಿ ಸಿದ್ಧರಾಮಯ್ಯ ಬದಲಾವಣೆ ಮಾಡಿದ್ದು ಭ್ರಷ್ಟಾಚಾರ ಮಾಡಲು: ಸುರೇಶ ಬಳೂಟಗಿ ಖಂಡನೆ.

ಬಡವರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರ್ಪಾಡು ಮಾಡಿದ್ದು ಭ್ರಷ್ಟಾಚಾರ ಮಾಡಿ ,ಬಡವರ ದುಡ್ಡು ಕಬಳಿಸಲು ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆರೋಪಿಸಿದ್ದಾರೆ.
ಕುಕನೂರ ಪಟ್ಟಣದಲ್ಲಿ ನಿರ್ಭಯ ದೃಷ್ಟಿ ನ್ಯೂಸ್ ಮಾತನಾಡಿದ ಅವರು ಈ ಮೊದಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅರ್ಹ ಬಡ ಫಲಾನುಭವಿಗಳಿಗೆ ತಲಾ ಐದು ಕೆ. ಜಿ.ಅಕ್ಕಿ ಹಾಗೂ ಪ್ರತಿಯೊಬ್ಬರಿಗೂ 170 ರೂಪಾಯಿಗಳಂತೆ ಕುಟುಂಬ ಸದಸ್ಯರ ಲೆಕ್ಕಾಚಾರದಂತೆ ಡಿ ಬಿ ಟಿ ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು.ನಂತರ ಹಣ ಹಾಕುವ ಯೋಜನೆ ನಿಲ್ಲಿಸಿ ತಲಾ 10 ಕೆ. ಜಿ. ಪಡಿತರ ವಿತರಿಸುವ ಕಾರ್ಯವನ್ನು ಮಾಡುವ ಮೂಲಕ ಮಾರ್ಪಾಡು ಮಾಡಿತು. ಈಗ ಬಡವರ ಹೊಟ್ಟೆ ಮೇಲೆ ಕಲ್ಲು ಎಳೆದು ತನ್ನ ಹಿಂಬಾಲಕರಿಗೆ ದುಡ್ಡು ಮಾಡಿಕೊಡುವ ಇಂದಿರಾ ಕಿಟ್ ಎಂಬ ಹೊಸ ಯೋಜನೆ ರೂಪಿಸಿ ಜನರಿಗೆ ಮಂಕು ಬೂದಿ ಎರಚುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದು ನಾಚಿಕೆಗೇಡಿನ ವಿಷಯ. ಇವರು ಕೊಡಲು ಯೋಚಿಸುತ್ತಿರುವ ಇಂದಿರಾ ಕಿಟ್ ನಲ್ಲಿ ಇನ್ನು ಮುಂದೆ 10 ಕೆ. ಜಿ.ಅಕ್ಕಿ ಅಥವಾ ಧಾನ್ಯದ ಬದಲಾಗಿ 5 ಕೆ. ಜಿ ಮಾತ್ರ ಅಕ್ಕಿ ನೀಡುತ್ತಿದ್ದು,4 ಜನರು ಇರುವ ಕುಟುಂಬಕ್ಕೆ ಒಂದು ಕೆ. ಜಿ ತೊಗರಿ ಬೇಳೆ,ಒಂದು ಕೆ.ಜಿ ಹೆಸರು ಬೇಳೆ, ಒಂದು ಕೆ. ಜಿ. ಅಡುಗೆ ಎಣ್ಣೆ, ಒಂದು ಕೆ. ಜಿ.ಸಕ್ಕರೆ ಹಾಗೂ ಒಂದು ಕೆ. ಜಿ. ಉಪ್ಪು ನೀಡುವುದಾಗಿ ಹೇಳುತ್ತಿದ್ದಾರೆ. ಇದನ್ನು ಹೇಗೆ ಲೆಕ್ಕಾಚಾರ ಹಾಕಿದರೂ , ಉತ್ತಮ ಗುಣಮಟ್ಟದ ದಿನಸಿ ವಿತರಿಸಿದರೂ 400 ರೂಪಾಯಿ ದಾಟುವುದಿಲ್ಲ. ಈ ಮೊದಲು 5 ಕೆ. ಜಿ. ಅಕ್ಕಿ ಬದಲಾಗಿ ತಲಾ 170 ರಂತೆ 4 ಜನರ 680 ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಇವರು ಕೊಡುತ್ತಿರುವ ಕಿಟ್ ನ ಬೆಲೆ 400 ರೂಪಾಯಿ ಲೆಕ್ಕ ಹಾಕಿದರೆ ನೇರವಾಗಿ ಇವರು ಇದರಲ್ಲಿ ಪ್ರತಿ ಕುಟುಂಬದಿಂದ ಸರಾಸರಿ 280 ರೂಪಾಯಿ ಕೊಳ್ಳೆ ಹೊಡೆಯಲು ನಿರ್ಧಾರ ಮಾಡಿದ್ದು,ಕರ್ನಾಟಕ ರಾಜ್ಯದ 1.28 ಕೋಟಿ ಬಿಪಿಎಲ್ ಕಾರ್ಡು ಇದ್ದು ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲು ಹುನ್ನಾರ ನಡೆಸಿದ್ದಾರೆ. ಇದರ ಜೊತೆಗೆ ಇವರು ನೀಡುವ ಕಿಟ್ ನ ಗುಣಮಟ್ಟ ಹೇಗೆ ಇರುತ್ತದೋ ಅದನ್ನು ದೇವರೇ ಬಲ್ಲ. ಸದಾ ಬಡವರ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಇಂಥ ಹಳ್ಳ ಹಿಡಿಯುವ ಯೋಜನೆಯನ್ನು ನಿಲ್ಲಿಸಿ ಈ ಮೊದಲು ಇದ್ದಂತೆ ತಲಾ 170 ರೂಪಾಯಿ ಹಣವನ್ನು ನೀಡಿದರೆ ಅವರು ತಮಗೆ ಬೇಕಾಗುವ ಉತ್ತಮ ಗುಣಮಟ್ಟದ ದಿನಸಿ ವಸ್ತುಗಳನ್ನು ಖರೀದಿಸಲು ಸಹಾಯ ಮಾಡಿದಂತಾಗುತ್ತದೆ. ಹೀಗಾಗಿ ಈ ಮೊದಲು ಇದ್ದಂತೆ ಹಣವನ್ನು ನೇರ ವರ್ಗಾವಣೆ ಮೂಲಕ ಅವರ ಖಾತೆಗೆ ಜಮಾ ಮಾಡಬೇಕೆಂದು ಆಗ್ರಹಿಸಿದರು.