ಮೊದಲಿದ್ದ ಮೀಸಲಾತಿಯಂತೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ನೇಮಕ ನಡೆಯಬೇಕು: ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಗ್ರಹ.

ಕುಕನೂರು:-ಗೋರಾ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ
ಶೇಕಡಾ 50ರಷ್ಟು ಮೀರಿ ಮೀಸಲಾತಿ ನೀಡಲು ಬರುವದಿಲ್ಲ ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಒಳಮೀಸಲಾತಿ ಅನ್ವಯ ಹೊಸ ನೇಮಕಾತಿಗೆ ವಿಳಂಬ ಮಾಡಿದ್ದ ಸರಕಾರ ಇತ್ತೀಚೆಗೆ ನಿರುದ್ಯೋಗಿಗಳ ಹೋರಾಟದಿಂದ ಎಚ್ಚೆತ್ತುಕೊಂಡು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು ಮೊದಲಿದ್ದಂತೆ ಶೇಕಡಾ 15 ಮೀಸಲಾತಿ ಅನ್ವಯ ನೇಮಕಾತಿ ಮಾಡುವುದಾಗಿ ಹೇಳಿದ್ದು, ಅದನ್ನು ಯಾವ ಮಾನದಂಡ ಅನುಸರಿಸುತ್ತೀರಿ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಕಾಂಗ್ರೆಸ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಕುಕನೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಮೊದಲಿನ ಮಾನದಂಡಂತೆ ನೇಮಕ ನಡೆದರೆ ನಮ್ಮದೇನೂ ಅಭ್ಯಂತರವಿಲ್ಲ,ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಮಾತು ಕೇಳಿ ಮತ್ತೇ ಈ ಸರ್ಕಾರ ಬಂಜಾರ, ಭೋವಿ,ಕೊರಚ,ಕೊರಮ,ಹಾಗೂ ಬಡ ಅಲೆಮಾರಿ ಜನಾಂಗಳಿಗೆ ಒಳ ಮೀಸಲಾತಿ ಅನ್ವಯ ನೇಮಕಾತಿ ಮಾಡಿ ಅನ್ಯಾಯ ಮಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಳೆ ಮೀಸಲಾತಿ ಅನ್ವಯ ನೇಮಕ ಮಾಡಲು ಹೊರಟ ಸರ್ಕಾರದ ನಡೆಯನ್ನು ಕೆಲವರು ವಿರೋಧಿಸುತ್ತಿದ್ದು ಅವರ ಒತ್ತಡಕ್ಕೆ ಮಣಿಯದೆ ಮೊದಲಿನಂತೆ ನೇಮಕಾತಿ ಪ್ರಕ್ರಿಯೆ ನಡೆಸಿ ವಿದ್ಯಾವಂತ ನಿರುದ್ಯೋಗಿಗಳ ಮತ್ತು ಪರಿಶಿಷ್ಟ ಜಾತಿಯ ಶೋಷಿತ ಜನರ ಹಿತಾಸಕ್ತಿ ಕಾಪಾಡಬೇಕು. ಈ ನೇಮಕ ಪದ್ಧತಿಯನ್ನು ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪತ್ರಿಕಾ ಹೇಳಿಕೆ ನೀಡಿದ್ದು ಅವರು ಕೂಡ ನಮ್ಮ ಜನರ ಭಾವನೆ ಮತ್ತು ನೋವನ್ನು ಅರ್ಥ ಮಾಡಿಕೊಂಡು ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳ ಹಿತ ಕಾಯುವ ಕೆಲಸ ಮಾಡಬೇಕು, ಕೆಲವು ಸಮುದಾಯಗಳಿಗೆ ಓಲೈಕೆ ಮಾಡಲು ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸುತ್ತಿರುವುದು ದುರಂತದ ವಿಷಯ.ಹೀಗಾಗಿ ಬಿಜೆಪಿ ಪಕ್ಷ ಮತ್ತು ಅವರ ತಂದೆ ಮಾನ್ಯ ಶ್ರೀ ಯಡಿಯೂರಪ್ಪನವರು ಸರ್ವ ಸಮುದಾಯಗಳ ಶ್ರೇಯಸ್ಸು ಬಯಸುವ ಮನಸ್ಥಿತಿಯವರಿದ್ದಾರೆ.ಆದರೆ 2023 ರಲ್ಲಿ ಕೆಲವು ಕುತಂತ್ರಿಗಳ ಮಾತು ಕೇಳಿ ಒಳಮೀಸಲಾತಿ ಜಾರಿ ಮಾಡಲು ಹೋಗಿ ನಿಮ್ಮ ಬಿಜೆಪಿ ಪಕ್ಷ ಹೀನಾಯ ಸೋಲು ಅನುಭವಿಸಿದ್ದನ್ನು ಮರೆತಿರುವಿರಿ ಅಂತ ಕಾಣುತ್ತಿದೆ. ಇದರ ಲಾಭವನ್ನು ಪಡೆದು ಕಾಂಗ್ರೆಸ್ ಪಕ್ಷ ನಮ್ಮಿಂದ ಮತ ಹಾಕಿಸಿಕೊಂಡು ಅವರು ಕೂಡ ನಮ್ಮ ಸಮಾಜಗಳಿಗೆ ದ್ರೋಹ ಮಾಡಲು ಹೊರಟಿರುವದು ನಾಚಿಗೇಡಿನ ಸಂಗತಿ.ಹೀಗಾಗಿ ಇಲ್ಲಿನ ಸರಕಾರ ಯಾರ ಒತ್ತಡಕ್ಕೂ,ಪ್ರಭಾವಕ್ಕೂ ಒಳಗಾಗದೆ ಸರ್ವ ಜನಾಂಗಗಳ ಹಿತ ಕಾಪಾಡಲು ಮೊದಲಿನಂತೆ ನೇಮಕಾತಿ ನಡೆಸಬೇಕು.ಇಲ್ಲದಿದ್ದರೆ ಜನರ ಕೆಂಗಣ್ಣಿಗೆ ಗುರಿಯಾಗಿ ನಿಮ್ಮ ಸರಕಾರ ಪತನವಾಗುತ್ತದೆ.ಇಂಥ ನಿಮ್ಮ ನಡವಳಿಕೆಯಿಂದ ರಾಜ್ಯದ ಜನರು ರೋಸಿ ಹೋಗಿದ್ದು, ಮುಂದಿನ ದಿನಗಳಲ್ಲಿ ರೊಚ್ಚಿಗೆದ್ದು ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.ಹೀಗಾಗಿ ಶೋಷಿತ ವರ್ಗಗಳ ನಾಯಕ ಎಂದು ಕರೆಸಿಕೊಳ್ಳುತ್ತಿರುವ ಅಹಿಂದ ನಾಯಕ ಮಾನ್ಯ ಶ್ರೀ ಸಿದ್ದರಾಮಯ್ಯನವರು ಇದರ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ಈ ಮೂಲಕ ನಾವು ಆಗ್ರಹಿಸುತ್ತೇವೆ ಎಂದರು. ಈ ಸಂಧರ್ಭದಲ್ಲಿ ಗೋರ ಸೇನಾ ಪ್ರಮುಖರಾದ ವಿಶ್ವನಾಥ ಬಳಗೇರಿ, ಯಮನೂರಪ್ಪ ಭಾನಾಪುರ, ಪ್ರಕಾಶ ಬಳಗೇರಿ, ದುರಗಪ್ಪ ಕಟ್ಟಿಮನಿ,ರಾಘವೇಂದ್ರ ಬಳಗೇರಿ, ನಾಗರಾಜ ಭಾನಾಪುರ, ಹನಮಂತ ಚವ್ಹಾಣ, ಮಹೇಶ್ ಕಾರಭಾರಿ,ಚೇತನ್ ಬಳಗೇರಿ ಶಶಿಕುಮಾರ ಕಾರಭಾರಿ, ಕಿರಣ ಕಾರಭಾರಿ,ವಿಜಯ ಚವ್ಹಾಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713